ಮೊನ್ನೆ ಯಾರೋ ಶ್ರೀಮಂತನೋರ್ವ ಚಿನ್ನದಲ್ಲಿ ಮಾಸ್ಕ್ ಮಾಡಿಸಿ ಹಾಕಿಕೊಂಡು ಸುದ್ದಿಯಾಗಿದ್ದ. ಇವೆಲ್ಲದರ ನಡುವೆ ಜಪಾನ್ ಕಂಪನಿಯೊಂದು ಸ್ಮಾರ್ಟ್ ಮಾಸ್ಕ್ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಕರೋನಾ ಬಂದಿದ್ದೇ ಬಂದಿದ್ದು, ಪ್ರತಿಯೊಬ್ಬರು ತಮ್ಮ ಆರೋಗ್ಯದ ದೃಷ್ಠಿಯಿಂದ ಮುಖಗವಸು (ಮಾಸ್ಕ್) ಧರಿಸುವುದು ಕಡ್ಡಾಯವಾಗಿದೆ. ಸರ್ಕಾರಗಳು ಸಹ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕ್ರಮವನ್ನು ಜಾರಿಗೆ ಮಾಡಿತ್ತು. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ತರಾವರಿ ಮಾಸ್ಕ್ಗಳು ಪರಿಚಯವಾಗಿವೆ.
ರೊಬೊಟಿಕ್ಸ್ ಸ್ಟಾರ್ಟ್ಅಪ್ ಆಗಿರುವ ಡೋನಟ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ “ಸಿ-ಮಾಸ್ಕ್” ವಿಶ್ವದ ಮೊದಲ “ಸ್ಮಾರ್ಟ್ ಮಾಸ್ಕ್” ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಮಾಸ್ಕ್ ಬ್ಲೂಟೂತ್ ಮೂಲಕ ಸ್ಮಾರ್ಟ್ಪೋನ್ನೊಂದಿಗೆ ಕನೆಕ್ಟ್ ಆಗಲಿದ್ದು, ಜೊತೆಗೆ ಕರೋನಾ ವೈರಸ್ನಿಂದ ಬಳಕೆದಾರರನ್ನು ರಕ್ಷಿಸುತ್ತದೆ.
ಕಂಪನಿ ಹೇಳುವ ಪ್ರಕಾರ “ಸಿ-ಮಾಸ್ಕ್”, ಸ್ಮಾರ್ಟ್ಫೋನ್ನೊಂದಿಗೆ ಸಂಪರ್ಕ ಸಾಧಿಸಲಿದ್ದು, ಸ್ಪಷ್ಟ ಧ್ವನಿ ಹೊರಡಿಸಲು ಸಹಾಯ ಮಾಡಲಿದೆ. ಉತ್ತಮ ವಿನ್ಯಾಸ ಮತ್ತು ಸ್ವಚ್ಛವಾದ ವಸ್ತುವಿನಿಂದ ಮಾಡಲಾಗಿದ್ದು ಮತ್ತು ಕೊರೊನಾ ವೈರಸ್ ವಿರುದ್ಧ ಕಾರ್ಯನಿರ್ವಹಿಸಲಿದೆ.
“ಸಿ-ಮಾಸ್ಕ್” ಇತರ ಸಾಮಾನ್ಯ ಮುಖವಾಡಗಳಂತೆ ಕಾಣುತ್ತದೆ. ಸ್ಮಾರ್ಟ್ಫೋನ್ ನೊಂದಿಗೆ ಸಂಪರ್ಕ ಸಾಧಿಸಲು ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುತ್ತದೆ.
ಎರಡೂ ಸಾಧನಗಳನ್ನು ಯಶಸ್ವಿಯಾಗಿ ಜೋಡಿಸಿದ ನಂತರ, “ಸಿ-ಮಾಸ್ಕ್” ಧರಿಸಬಹುದಾದ ಸ್ಮಾರ್ಟ್ ಸಾಧನವಾಗಿ ಬದಲಾಗುತ್ತದೆ, ಇದರೊಂದಿಗೆ ಬಳಕೆದಾರರು ಸ್ಮಾರ್ಟ್ಫೋನ್ ಅಗತ್ಯವಿರುವ ವಿವಿಧ ಕಾರ್ಯಗಳನ್ನು ನಿರ್ವಹಿಸಬಹುದು. ಫೋನ್ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು.
ಕೆಲವು ಬಾರಿ ಮಾಸ್ಕ್ ಧರಿಸುವಾಗ ಸರಿಯಾಗಿ ಧ್ವನಿಯು ಕೇಳುವುದಿಲ್ಲ, ಆದರೆ ಈ ಮಾಸ್ಕ್ನಲ್ಲಿ ಆ ಸಮಸ್ಯೆ ಇಲ್ಲ ಎನ್ನಲಾಗಿದ್ದು, ಇದು ಉತ್ತಮವಾದ ಧ್ವನಿಯನ್ನು ಕೇಳುವ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಕಂಪನಿಯ “ಸಿ-ಕನೆಕ್ಟ್” ಅಪ್ಲಿಕೇಶನ್ನ ಸಹಾಯದಿಂದ “ಸ್ಮಾರ್ಟ್” ಮುಖವಾಡದ ಮೂಲಕ ಜಪಾನೀಸ್ ಭಾಷೆಯನ್ನು 8 ವಿವಿಧ ಭಾಷೆಗಳಿಗೆ ಅನುವಾದಿಸಬಹುದು, ಹೆಚ್ಚುವರಿ ಅನುವಾದ ಸೇವೆಗಳಿಗಾಗಿ ನೀವು ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕಂಪನಿಯು ಸೆಪ್ಟೆಂಬರ್ ನಲ್ಲಿ ಮೊದಲಿಗೆ ಜಪಾನ್ನಲ್ಲಿ 5,000 ಸಿ-ಮಾಸ್ಕ್ ಗಳನ್ನು ವಿತರಿಸುವ ಗುರಿ ಹೊಂದಿದೆ. ಇದಾದ ನಂತರ ಯುರೋಪ್, ಅಮೆರಿಕಾ ಮತ್ತು ಚೀನಾ ಮಾರುಕಟ್ಟೆಗೆ ಪ್ರವೇಶಿಸುವ ಆಶಯವನ್ನು ಹೊಂದಿದೆ. ಸದ್ಯ ಸಿ-ಮಾಸ್ಕ್ ಬೆಲೆ ಸುಮಾರು 2760 ರೂ.ಗಳಾಗಿದೆ.