ಟೆಕ್ ಜಗತ್ತಿನಲ್ಲಿ ಕೆಲವೇ ಕೆಲವು ಸಂಸ್ಥೆಗಳ ಏಕಸ್ವಾಮ್ಯವಿದೆ. ಗೂಗಲ್, ಫೇಸ್ಬುಕ್, ಮೈಕ್ರೋಸಾಫ್ಟ್ ಸಂಸ್ಥೆಗಳು ಆ ಕೆಲವು ಟೆಕ್ ದೈತ್ಯಗಳು. ಸಾಮಾಜಿಕ ಜಾಲತಾಣವಾಗಿ ಫೇಸ್ಬುಕ್ ಬೆಳೆದ ರೀತಿಯಂತೂ ಕಳೆದ ಹತ್ತು ವರ್ಷಗಳಲ್ಲಿ ಅದು ಸೃಷ್ಟಿಸಿದ ಅವಾಂತರಗಳಿಂದ ತಿಳಿಯುತ್ತದೆ. ಇಂತಹ ದೈತ್ಯ ಸಂಸ್ಥೆ ಎದುರು ತಲೆ ಎತ್ತುವುದು ಸುಲಭದ ಮಾತೂ ಆಗಿರಲಿಲ್ಲ. ಆದರೆ ಈಗ ಟ್ರಂಪ್ ತಮ್ಮ ಟ್ರಂಪ್ ಮಿಡಿಯಾ ಅಂಡ್ ಟೆಕ್ನಾಲಜಿ ಗ್ರೂಪ್ ಮೂಲಕ ‘ಟ್ರೂತ್ ಸೋಷಿಯಲ್’ ಹೆಸರಿನ ಸಾಮಾಜಿಕ ಜಾಲತಾಣವನ್ನು ಪರಿಚಯಿಸಲು ಹೊರಟಿದ್ದಾರೆ.
ಮುಂದಿನ ತಿಂಗಳು ಇದು ಆಹ್ವಾನಿತ ಬಳಕೆದಾರರಿಗೆ ಬೀಟಾ ಆವೃತ್ತಿ ಲಭ್ಯವಾಗಲಿದ್ದು, ‘ಬೃಹತ್ ಟೆಕ್ ಕಂಪನಿಗಳ ದಬ್ಬಾಳಿಕೆಗೆ ಎದುರಾಗಿ ನಾನು ಟ್ರೂಥ್ ಸೋಶಿಯಲ್ ಮತ್ತು ಟಿಎಂಟಿಜಿ ರೂಪಿಸಿದ್ದೇನೆ ಎಂದು ಟ್ರಂಪ್ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಮೆರಿಕದ ಕ್ಯಾಪಿಟಲ್ ಹಿಲ್ನಲ್ಲಿ ಜನವರಿ 6ರಂದು ಹಿಂಸಾಚಾರ ನಡೆದಿತ್ತು. ಆಗಿನ್ನು ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಲ್ಲಿದ್ದರು ಮತ್ತು ಅವರ ಅಭಿಮಾನಿಗಳೇ ಸಂಸತ್ ಭವನಕ್ಕೆ (ಕ್ಯಾಪಿಟಲ್) ನುಗ್ಗಿ ದಾಂದಲೆ ನಡೆಸಿದ್ದರು. ಸ್ಪೀಕರ್ ಕಚೇರಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿದ್ದರು. ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಕಲಾಕೃತಿಗಳನ್ನು ಹೊತ್ತೊಯ್ದಿದ್ದರು. ಈ ಘಟನೆಯ ಬಳಿಕ ಪ್ರಚೋದನೆಯ ಕಾರಣ ನೀಡಿ ಫೇಸ್ಬುಕ್ ಮತ್ತು ಟ್ವಿಟರ್ಗಳು ಡೊನಾಲ್ಡ್ ಅವರ ಖಾತೆಯನ್ನು ನಿರ್ಬಂಧಿಸಿದ್ದವು.
ಪ್ರಮುಖ ಸಾಮಾಜಿಕ ಮಾಧ್ಯಮಗಳು ತಮ್ಮ ಖಾತೆ ನಿರ್ಬಂಧಿಸಿದ್ದನ್ನು ಪ್ರತಿಭಟಿಸಿ, ಅಂದೇ ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮ ರೂಪಿಸುವುದಾಗಿ ಘೋಷಿಸಿದ್ದರು. ಈಗ ಆ ಮಾತನ್ನು ನಿಜ ಮಾಡಿದ್ದಾರೆ. ಮುಂದಿನ ತಿಂಗಳ ಬೀಟಾ (ಪರೀಕ್ಷಾರ್ಥ ಸೇವೆ) ಆವೃತ್ತಿ ಆರಂಭವಾಗಲಿದ್ದು, ಮುಂದಿನ ವರ್ಷ ಪೂರ್ಣ ಪ್ರಮಾಣದ ಅಪ್ಲಿಕೇಷನ್ ಅಮೆರಿಕನ್ನರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಫೇಸ್ಬುಕ್ನ ನೆರವಿನೊಂದಿಗೆ ಅಧಿಕಾರಕ್ಕೆ ಬಂದರು ಎಂಬುದನ್ನು ಹಲವು ಅಧ್ಯಯನ, ತನಿಖಾ ವರದಿಗಳು ಬಿಚ್ಚಿಟ್ಟಿವೆ. ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣವು ಅತ್ಯಂತ ಪ್ರಭಾವಿ ರಾಜಕೀಯ ಅಸ್ತ್ರ ಎಂಬುದನ್ನು ಮನಗಂಡಿರುವ ಟ್ರಂಪ್ ತಮ್ಮದೇ ಆದ ವೇದಿಕೆಯನ್ನು ಹೊಂದುವ ಉತ್ಸಾಹದಲ್ಲಿದ್ದಾರೆ.
ಒಂದೆಡೆ ಫೇಸ್ಬುಕ್ ಡಾಟಾ ಸೋರಿಕೆ, ರಾಜಕೀಯ ವಿಚಾರಗಳಲ್ಲಿ ಪಾಲ್ಗೊಳ್ಳುವಿಕೆ, ಮಾರುಕಟ್ಟೆ ಉದ್ದೇಶಗಳಿಗೆ ಬಳಕೆದಾರರ ಮಾಹಿತಿಯ ದುರ್ಬಳಕೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಾ, ಬಳಕೆದಾರರನ್ನು ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ಟ್ರಂಪ್ ಹೊಸ ಸಾಮಾಜಿಕ ಜಾಲತಾಣ ಸ್ಥಾಪಿಸ ಹೊರಟಿರುವುದು ಟೆಕ್ ವಲಯದಲ್ಲಿ ಸಂಚಲನ ಉಂಟು ಮಾಡಿದೆ. ಇದೇ ವೇಳೆ ಫೇಸ್ಬುಕ್ ತನ್ನ ಹೆಸರು ಬದಲಿಸಿಕೊಳ್ಳಲು ಹೊರಟಿರುವುದೂ ಕೂಡ ಕುತೂಹಲಕಾರಿಯಾಗಿ ಗೋಚರಿಸುತ್ತಿದೆ.