ಮಾಹಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತಹ ಖಾಸಗಿತನದ ನಿಯಮಗಳನ್ನು ಬಳಕೆದಾರರ ಮೇಲೆ ಹೇರಲು ಹೊರಟ ಕಾರಣ ವಾಟ್ಸ್ಆಪ್ ತೊರೆದು ಸಿಗ್ನಲ್ ಆಪ್ ಮೊರೆ ಹೋಗುತ್ತಿದ್ದಾರೆ. ಈಗ ಉಚಿತ ಆಪ್ಗಳ ಪಟ್ಟಿಯಲ್ಲಿ ಸಿಗ್ನಲ್ ನಂಬರ್ 1 ಸ್ಥಾನಕ್ಕೇರಿದೆ!

ಎರಡು ವರ್ಷಗಳ ಹಿಂದೆ 40 ಕೋಟಿ ಬಳಕೆದಾರರನ್ನು ಹೊಂದಿದ್ದ ವಾಟ್ಸ್ ಆಪ್ ಕಳೆದ ವರ್ಷ ಡಿಸೆಂಬರ್ ಅಂತ್ಯದ ಹೊತ್ತಿಗೆ 6 ಕೋಟಿ ಬಳಕೆದಾರರನ್ನು ಕಳೆದುಕೊಂಡಿತ್ತು. ಆದರೆ ಇದು ಭಾರಿ ಕುಸಿತವನ್ನು ಕಂಡಿದ್ದು ಕಳೆದವಾರ ವಾಟ್ಸ್ಆಪ್ ತನ್ನ ಖಾಸಗಿ ನಿಯಮಗಳನ್ನು ಬದಲಿಸುತ್ತಿರುವ ಹೇಳಿಕೆ ನೀಡಿದ ಬಳಿಕ.
ಕೇವಲ ಮೂರು ದಿನಗಳ ಅವಧಿಯಲ್ಲಿ ಹೆಚ್ಚು ಸುರಕ್ಷಿತ ಎಂದು ಹೇಳಲಾದ ಸಿಗ್ನಲ್ ಆಪ್ ಜನಪ್ರಿಯವಾಗಿದ್ದಷ್ಟೇ ಅಲ್ಲ, ಅತಿ ಹೆಚ್ಚು ಡೌನ್ಲೋಡ್ ಆಗುವ ಮೂಲಕ ಉಚಿತ ಮೆಸೇಜಿಂಗ್ ಆಪ್ಗಳ ಪಟ್ಟಿಯಲ್ಲಿ ವಾಟ್ಸ್ ಆಪ್ ಅನ್ನು ಎರಡನೆಯ ಸ್ಥಾನಕ್ಕೆ ತಳ್ಳಿದೆ.
ಭಾರತ ಅಷ್ಟೇ ಅಲ್ಲದೆ ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ, ಫಿನ್ಲ್ಯಾಂಡ್, ಹಾಂಕಾಂಗ್ ಮತ್ತು ಸ್ವಿಟ್ಜರ್ಲ್ಯಾಂಡ್ಗಳಲ್ಲೂ ಇದೇ ಬೆಳವಣಿಗೆ. ಸಿಗ್ನಲ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ”ನೋಡು ನೀನೇನು ಮಾಡಿಬಿಟ್ಟೆ” ವಾಟ್ಸ್ಆಪ್ನ ಕಾಲೆಳೆದಿದೆ.
ಅತಿ ದೊಡ್ಡ ಬಳಕೆದಾರರ ಮಾರುಕಟ್ಟೆಯನ್ನು ಹೊಂದಿದ್ದ ವಾಟ್ಸ್ಆಪ್ ಯಾವುದೇ ಹೊಸ ಫೀಚರ್ ಪರಿಚಯಿಸುವ ಉದ್ದೇಶವಿದ್ದರೆ ಅದನ್ನು ಮೊದಲು ಮಾಡುತ್ತಿದುದೇ ಭಾರತೀಯ ಮಾರುಕಟ್ಟೆಯಲ್ಲಿ. ಏಕೆಂದರೆ ಅತಿ ದೊಡ್ಡ ಸಂಖ್ಯೆಯ ಬಳಕೆದಾರರು ಇಲ್ಲಿದ್ದರು.
ವಾಟ್ಸ್ಆಪ್ನ ಡಾರ್ಕ್ಮೋಡ್ ಫೀಚರ್ ಆಗಲಿ, ಪೇಮೆಂಟ್ ಆಗಲಿ ಎಲ್ಲವೂ ಪ್ರಯೋಗವಾಗಿದ್ದು ಮೊದಲ ಭಾರತದಲ್ಲಿ. ಸುಲಭವಾಗಿ ಸೆಳೆಯಬಹುದಾದ ಮಾರುಕಟ್ಟೆ ಎಂದು ಭಾವಿಸಿದ್ದ ವಾಟ್ಸ್ಆಪ್ ತನ್ನೆಲ್ಲಾ ಮಾರುಕಟ್ಟೆಯ ತಂತ್ರಗಳನ್ನು ಸಲೀಸಾಗಿ ಇಲ್ಲಿ ಬಳಸುತ್ತಿತ್ತು.
ಫೇಸ್ಬುಕ್, ವಾಟ್ಸ್ಆಪ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಅತಿದೊಡ್ಡ ಬಳಕೆದಾರರ ಜಾಲವನ್ನು ಹೊಂದಿರುವ ಧಾಷ್ಟ್ಯದಿಂದ ಕಳೆದ ಬಳಕೆದಾರರ ಮಾಹಿತಿ ಬಳಸಿಕೊಳ್ಳುವ ಹೊಸ ಖಾಸಗಿನಿಯಮವನ್ನು ಫೆಬ್ರವರಿ8 ಒಳಗೆ ಒಪ್ಪಿಕೊಳ್ಳಿ ಇಲ್ಲವೇ ನಿಮ್ಮ ಅಕೌಂಟ್ ಕಳೆದುಕೊಳ್ಳಿ ಎಂದು ಹೇಳಿತ್ತು.
ವಾಟ್ಸ್ಆಪ್ನ ಈ ನಿಯಮದಿಂದ ಆಕ್ರೋಶಗೊಂಡ ಬಳಕೆದಾರರು ಪರ್ಯಾಯ ಆಪ್ ಹುಡುಕಾಟದಲ್ಲಿ ಗುರುತಿಸಿದ್ದು ಸಿಗ್ನಲ್ ಅನ್ನು.
ಇದನ್ನೂ ಓದಿ | ವಾಟ್ಸ್ಆಪ್ ಹೊಸ ಕಿರಿಕ್ ನೀತಿ: ಇಲ್ಲಿವೆ ಟಾಪ್ 5 ಪ್ರೈವೇಟ್ ಮೆಸೇಜಿಂಗ್ ಆಪ್ಗಳು
ಸಿಗ್ನಲ್ ಸಂಪೂರ್ಣ ಮಾಹಿತಿ ಸುರಕ್ಷತೆಯ ವಾಗ್ದಾನ ನೀಡುತ್ತದೆ. ಬಳಕೆಯಲ್ಲೂ ಅತ್ಯಂತ ಸರಳ. ಇದೇ ಕಾರಣಕ್ಕೆ ಖಾಸಗಿತನದ ಬಗ್ಗೆ ಅಪಾರ ಕಾಳಜಿ ಇರುವ ಎಡ್ವರ್ಡ್ ಸ್ನೋ ಡೆನ್ ಐದು ವರ್ಷಗಳ ಹಿಂದೆಯೇ ನಾನು ಸಿಗ್ನಲ್ ಆಪ್ ಬಳಸುತ್ತೇನೆ ಎಂದು ಹೇಳಿಕೊಂಡಿದ್ದರು.
ಇತ್ತೀಚೆಗೆ, ಟೆಸ್ಲಾ, ಸ್ಪೇಸ್ಎಕ್ಸ್ ಮಾಲಿಕ ಎಲಾನ್ ಮಸ್ಕ್ ಕೂಡ ‘ ಸಿಗ್ನಲ್ ಬಳಸಿ’ ಎಂದು ಟ್ವೀಟ್ ಮಾಡಿ ಸಲಹೆ ನೀಡಿದ್ದರು.
ಕಳೆದ ವಾರ ಫೋರ್ಬ್ಸ್ ಪಟ್ಟಿದಂತೆ ವಾಟ್ಸ್ಆಪ್ ತನ್ನ ಬಳಕೆದಾರರಿಂದ ಎರಡು ರೀತಿಯಲ್ಲಿ ಮಾಹಿತಿ ಸಂಗ್ರಹಿಸುತ್ತದೆ. ಒಂದು ಆಪ್ ಚಟುವಟಿಕೆಗಳನ್ನು ಮತ್ತು ಆಪ್ನ ಒಟ್ಟು ನಾಲಿಟಿಕ್ಸ್ ಅನ್ನು. ಅಂದರೆ ನಿರಂತರವಾಗಿ ಬಳಕೆದಾರರ ಗೂಢಚಾರಿಕೆ ಮಾಡುವುದಲ್ಲದೆ, ಅದರ ಅನಾಲಿಟಿಕ್ಸ್ ಸಂಗ್ರಹಿಸುವುದು (ಇದು ನೀವು ಹೆಚ್ಚು ಭೇಟಿ ನೀಡುವ, ಹೆಚ್ಚು ಮಾತನಾಡುವ, ಹೆಚ್ಚು ಖರೀದಿಸುವ ವಿವರಗಳನ್ನು ಕಲೆಹಾಕುವ ವಿಧಾನ). ಅಂದರೆ ನಿಮ್ಮ ಖರೀದಿ, ನೀವಿರುವ/ಓಡಾಡುವ ಸ್ಥಳಗಳು, ಕಾಂಟ್ಯಾಕ್ಟ್ಗಳು, ಬಳಕೆದಾರರ ಎಲ್ಲ ಮಾಹಿತಿ, ಯೂಸರ್ ಐಡಿಗಳು, ಡಿವೈಸ್ ಮಾಹಿತಿ, ಬಳಕೆಯ ಪ್ರಮಾಣ, ಹಣಕಾಸಿನ ಮಾಹಿತಿ.
ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಭಾರತೀಯರು, ಮಾಹಿತಿ ಸುರಕ್ಷತೆ, ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡುವ ಸಿಗ್ನಲ್ ಆಪ್ನ ಕಡೆ ವಾಲಿದ್ದಾರೆ.
ಎಲಾನ್ ಮಸ್ಕ್ ಟ್ವೀಟ್ ಬಳಿಕ ಶೇರು ಮಾರುಕಟ್ಟೆಯಲ್ಲೂ ಹೆಚ್ಚಿನ ಮೌಲ್ಯ ಗಳಿಸಿದೆ. ಕಳೆದ ವರ್ಷಾಂತ್ಯದವರೆಗೆ 1 ಡಾಲರ್ ಕೂಡ ದಾಟದ ಸಿಗ್ನಲ್ ಬೆಲೆ ಈಗ 7.19 ಡಾಲರ್! ಜ.8ರಂದು 10 ಡಾಲರ್ವರೆಗೆ ಇದರ ಶೇರು ಮೌಲ್ಯ ಹೆಚ್ಚಿತ್ತು. ವಾಟ್ಸ್ ಆಪ್ ಸಿಗ್ನಲ್ ಅತಿ ದೊಡ್ಡ ಹೊಡೆತ ನೀಡುತ್ತಿರುವ ಲಕ್ಷಣ ಇದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
