ಕೋವಿಡ್19ನಿಂದಾಗಿ ಇಂಟರ್ನೆಟ್ ಅವಲಂಬನೆ ವಿಪರೀತವಾಗಿದೆ. ಸರ್ಕಾರ ಕೂಡ ಡಿಜಿಟಲ್ ವಹಿವಾಟಿಗೆ ಹೆಚ್ಚು ಒತ್ತು ನೀಡುತ್ತಲೇ ಇದೆ. ಆದರೆ ಮೂಲ ಸೌಕರ್ಯಗಳ ವಿಷಯದಲ್ಲಿ ಎಷ್ಟರಮಟ್ಟಿಗೆ ಸಿದ್ಧರಾಗಿದ್ದಾರೆ. ಎಸ್ಬಿಐನ ಯೊನೊ ಆಪ್ ಸೇವೆ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಗ್ರಾಹಕರು ದೂರುಗಳ ಮಳೆಗರೆದಿದ್ದಾರೆ

ಸಾಮಾಜಿಕ ಜಾಲಗಳ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ದೂರುಗಳ ಮಳೆ ಸುರಿಸುತ್ತಿದ್ದಾರೆ. ಎಸ್ಬಿಐನ ಮೊಬೈಲ್ ಬ್ಯಾಂಕಿಂಗ್ನ ಆಪ್ ಯೊನೊ ಕಳೆದ ಕೆಲವು ಗಂಟೆಗಳಿಂದ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು, ಗ್ರಾಹಕರಿಗೆ ಅನನುಕೂಲ ಉಂಟಾಗಿದೆ.
ವಾಸ್ತವದಲ್ಲಿ ಕಳೆದ ಎರಡು ದಿನಗಳಿಂದ ಸಮಸ್ಯೆ ಎದುರಾಗುತ್ತಿದ್ದು, ಈ ನಿಟ್ಟಿನಲ್ಲಿ ಎಸ್ಬಿಐ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಅಷ್ಟೇ ಅಲ್ಲ ಇತರೆ ಬ್ಯಾಂಕ್ ಗ್ರಾಹಕರು ಎಸ್ಬಿಐನ ಖಾತೆಗಳಿಗೆ ಹಣವರ್ಗಾಯಿಸುವಲ್ಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ತಾನೇ ಎಚ್ಡಿಎಫ್ಸಿ ಬ್ಯಾಂಕ್ ಇದೇ ರೀತಿಯ ತಾಂತ್ರಿಕ ಸಮಸ್ಯೆ ಎದುರಿಸಿತ್ತು.
ಎಸ್ಬಿಐ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದ್ದು, ಕೋವಿಡ್ ಕಾರಣದಿಂದಾಗಿ ಡಿಜಿಟಲ್ ವಹಿವಾಟನ್ನೇ ಎಲ್ಲರೂ ಅವಲಂಬಿಸಿದ್ದಾರೆ. ಇಂತಹ ಹೊತ್ತಿನಲ್ಲಿ ಸೇವೆಯಲ್ಲಿ ಉಂಟಾಗಿರುವ ವ್ಯತ್ಯಾಸ ಗ್ರಾಹಕರನ್ನು ಕೆರಳಿಸಿದೆ
ರೋಸಿ ಹೋಗಿರುವ ಗ್ರಾಹಕರು ಟ್ವಿಟರ್ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿರುವ ರೀತಿ ಇದು:
ಎಸ್ಬಿಐ ಕೂಡ ಅನನುಕೂಲಕ್ಕೆ ವಿಷಾದ ವ್ಯಕ್ತಪಡಿಸಿ ಟ್ವೀಟ್
ಮರುಕಳಿಸುತ್ತಲೇ ಇರುವ ಸಮಸ್ಯೆ
ಎಸ್ಬಿಐ ಕಳೆದ ಒಂದು ವರ್ಷದಲ್ಲಿ ಈ ರೀತಿಯ ತಾಂತ್ರಿಕ ದೋಷವನ್ನು ಎದುರಿಸುತ್ತಿರುವುದು 25ನೇ ಬಾರಿ ಎನ್ನಲಾಗುತ್ತಿದೆ. ಕಳೆದ ಮೂವತ್ತು ದಿನಗಳಲ್ಲಿ ಇದು ಮೂರನೆಯ ಬಾರಿ ಎಂದು ಗ್ರಾಹಕರು ದೂರುಗಳು ಹೇಳುತ್ತಿವೆ. ಕಳೆದ ಆಗಸ್ಟ್ ತಿಂಗಳಲ್ಲಿ 4ನೇ ತಾರೀಕಿನಿಂದ 11ನೇ ತಾರೀಕಿನವರೆಗೆ ಅಂದರೆ ಒಂದು ವಾರ ಕಾಲ ಸೇವೆಯಲ್ಲಿ ವ್ಯತ್ಯಾಸವಾಗಿತ್ತು.
ಕಳೆದ ಆರು ತಿಂಗಳಲ್ಲಿ ಯುಪಿಐ ಸೇವೆಯ ಬಳಕೆ ವ್ಯಾಪಕವಾಗಿ ಹೆಚ್ಚಾಗಿದ್ದು, ಈ ಒತ್ತಡವನ್ನು ನಿರ್ವಹಿಸುವಷ್ಟು ಸಮರ್ಥವಾದ ತಾಂತ್ರಿಕ ಮೂಲ ಸೌಕರ್ಯ ಬ್ಯಾಂಕ್ಗಳಲ್ಲಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದಶಕದ ಹಿಂದೆ ವಿನ್ಯಾಸ ಮಾಡಿದ ಮೂಲಸೌಲಭ್ಯಗಳು ಇಂದಿಗೂ ಬಳಕೆಯಲ್ಲಿವೆ. ಇವು ಇಂದಿನ ಬೇಡಿಕೆಯನ್ನು ನಿರ್ವಹಿಸುವಷ್ಟು ಶಕ್ತವಾಗಿಲ್ಲ ಎನ್ನಲಾಗುತ್ತಿದೆ.