ಸ್ಮಾರ್ಟ್ ಪೋನಿನಲ್ಲಿರುವ ಫೀಚರ್ಗಳನ್ನು ಒಳಗೊಂಡ ಸ್ಮಾರ್ಟ್ ಫೀಚರ್ ಫೋನ್ಗಳನ್ನು ಈಗಾಗಲೇ ಲಾಂಚ್ ಮಾಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಮತ್ತೊಂದು ಹೊಸ ಫೋನ್ ಅನ್ನು ಲಾಂಚ್ ಮಾಡುವ ಯೋಜನೆಯನ್ನು ಹೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಯೋ ಮಾತೃ ಕಂಪನಿಯಾದ ರಿಲಯನ್ಸ್, ಇದೇ ಜುಲೈ 15 ರಂದು ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಿದೆ, ಈ ಸಂದರ್ಭದಲ್ಲಿಯೇ ಮೂರನೇ ಜಿಯೋ ಫೋನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಜಿಯೋ ಫೋನ್ಗಳನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿಯೇ ಪರಿಚಯಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಹಿಂದೆ 2017ರ ಜುಲೈ 21ರಂದು ನಡೆದ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೊದಲ ಜಿಯೋ ಫೋನ್ ಅನ್ನು ಲಾಂಚ್ ಮಾಡಿ ಬಳಕೆದಾರರಿಗೆ ಹಿಂಪಡೆಯಬಹುದಾದ ಠೇವಣಿಯನ್ನು ಪಡೆದು ಉಚಿತವಾಗಿ ಫೋನ್ ದೊರೆಯುವಂತೆ ಮಾಡಿತ್ತು. ಇದೇ ಮಾದರಿಯಲ್ಲಿ 2018 ರ ಜುಲೈ 31ರಂದು ನಡೆದ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೂ. 2999ಕ್ಕೆ ಜಿಯೋ ಫೋನ್ 2 ಅನ್ನು ಲಾಂಚ್ ಮಾಡಿತ್ತು.
ಹಾಗಾಗಿ ಇದೇ ಜುಲೈ 15 ರಂದು ನಡೆಯಲಿರುವ 43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೂರನೇ ಫೋನ್ ಅನ್ನು ಲಾಂಚ್ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ. ಆದರೆ ಈ ಫೋನಿನ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ.
ಸದ್ಯ ದೇಶದಲ್ಲಿ ವಿದೇಶಿ ವಸ್ತುಗಳನ್ನು ಅದರಲ್ಲಿಯೂ ಚೀನಾ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ಮನಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ, ಜಿಯೋ ಇದರ ಲಾಭವನ್ನು ಪಡೆದುಕೊಳ್ಳುವ ಸಲುವಾಗಿಯಾದರು ಹೊಸ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಸಭೆಯಲ್ಲಿಯೂ ಹೊಸ ತನ:
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ಮೊದಲ ಬಾರಿಗೆ ಆನ್ಲೈನ್ ವರ್ಚುವಲ್ ಪ್ಲಾಟ್ಫಾರ್ಮ್ನೊಂದಿಗೆ ದೊಡ್ಡ ಮಟ್ಟದಲ್ಲಿ ಆಯೋಜಿಸಿದೆ. 500ಕ್ಕೂ ವಿವಿಧ ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಷೇರುದಾರರಿಗೆ ಈ ಸಭೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಈ ಸಭೆಯ ಬಗ್ಗೆ ಮಾಹಿತಿ ತಿಳಿಯುವ ಸಲುವಾಗಿಯೇ ವಾಟ್ಸ್ಆಪ್ ಚಾಟ್ ಬಾಟ್ ಅನ್ನು ಸಹ ಪ್ರಾರಂಭಿಸಿದೆ.