ಇನ್ನು ಮುಂದೆ ಭಾರತದಲ್ಲಿಯೇ ನಿರ್ಮಾಣವಾಗಲಿದೆ ಆಪಲ್ ಐಫೋನ್ 11..!

ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಸೃಷ್ಠಿಸಿಕೊಂಡಿರುವ ಆಪಲ್, ಈ ಹಿಂದೆಯೇ ಭಾರತದಲ್ಲಿ ತನ್ನ ಫೋನ್‌ಗಳನ್ನು ತಯಾರಿಸುವ ಕಾರ್ಯ ಆರಂಭಿಸಿತ್ತು, ಈಗ ಅದಕ್ಕೆ  ಮತ್ತಷ್ಟು ಚಾಲನ ಶಕ್ತಿಯನ್ನು ನೀಡಲು ಮುಂದಾಗಿದ್ದು, ಟಾಪ್ ಎಂಡ್ ಐಫೋನ್‌ಗಳನ್ನು ಭಾರತದಲ್ಲಿಯೇ ನಿರ್ಮಿಸಲು ಸಿದ್ಧತೆ ನಡೆಸಿದೆ.

ಮೊದಲು ಭಾರತದಲ್ಲಿ ಕೇವಲ ಆರಂಭಿಕ ಆವೃತ್ತಿಯ ಫೋನ್‌ಗಳನ್ನು ಮಾತ್ರವೇ ತಯಾರಿಸುವ ಉದ್ದೇಶವನ್ನು ಆಪಲ್ ಹೊಂದಿತ್ತು. ಆದರೆ ಸದ್ಯ ಜಾಗತಿಕವಾಗಿ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿರುವ ಸಲುವಾಗಿ ಆಪಲ್, ಇನ್ನು ಮುಂದೇ ತನ್ನ ಟಾಪ್ ಎಂಡ್ ಫೋನ್ ಐಫೋನ್ 11 ಅನ್ನು ಇಲ್ಲಿಯೇ ತಯಾರಿಸಲಿದೆ.

ಈ ಹಿಂದೆ ಐಫೋನ್‌ಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಆಪಲ್, ಅದಕ್ಕಾಗಿ ಪ್ರತಿ ಫೋನಿಗೆ ಶೇ.20 ರಷ್ಟು ತೆರಿಗೆಯನ್ನು ಪಾವತಿ ಮಾಡುತ್ತಿತ್ತು. ಈಗ ನಮ್ಮ ದೇಶದಲ್ಲಿಯೇ ಫೋನ್ ತಯಾರಿಕೆ ಆರಂಭವಾಗಿರುವ ಹಿನ್ನಲೆಯಲ್ಲಿ ಬೆಲೆಯಲ್ಲಿಯೂ ಸಾಕಷ್ಟು ಇಳಿಕೆ ಕಂಡು ಬರಲಿದೆ.

ಸದ್ಯ ಭಾರತವು ಸ್ಮಾರ್ಟ್‌ಫೋನ್ ಮಾರಾಟಗಾರರಿಗೆ ಉತ್ತಮ ಮಾರುಕಟ್ಟೆಯಾಗಿದ್ದು, ಸುಮಾರು 50 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು ಭಾರತದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಕಂಪನಿಗಳು ಭಾರತದಲ್ಲಿಯೇ ಸ್ಮಾರ್ಟ್‌ಫೋನ್ ನಿರ್ಮಾಣಕ್ಕೆ ದೊಡ್ಡ ಮಟ್ಟದಲ್ಲಿ ಹಣವನ್ನು ಹೂಡಿಕೆ ಮಾಡಿವೆ. ಆಪಲ್ ಸಹ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

ಇದನ್ನು ಓದಿ: ಜೊತೆಯಾಗಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ನಿರ್ಮಿಸಲಿವೆ ಜಿಯೋ-ಗೂಗಲ್

ಈ ತಿಂಗಳ ಆರಂಭದಲ್ಲಿ, ಐಫೋನ್ ಮತ್ತು ಇತರ ಆಪಲ್ ಸಾಧನಗಳಿಗೆ ಪ್ರಮುಖ ಪೂರೈಕೆದಾರರಾಗಿರುವ ಫಾಕ್ಸ್‌ ಕಾನ್, ಐಫೋನ್ ಮಾದರಿಗಳನ್ನು ಜೋಡಿಸುವ ತನ್ನ ಭಾರತದ ಕಾರ್ಖಾನೆಯನ್ನು ವಿಸ್ತರಿಸಲು 1 ಬಿಲಿಯನ್ ಡಾಲರ್ (ಸರಿಸುಮಾರು 7,491 ಕೋಟಿ ರೂ.) ಹೂಡಿಕೆ ಮಾಡಲು ಯೋಜಿಸಿದೆ ಎಂದು ವರದಿಯಾಗಿತ್ತು. ಪೆಗಾಟ್ರಾನ್ – ಫಾಕ್ಸ್‌ ಕಾನ್ ನಂತರದ ಎರಡನೇ ಅತಿದೊಡ್ಡ ಐಫೋನ್ ಅಸೆಂಬ್ಲರ್ – ದೇಶದಲ್ಲಿ ಹೂಡಿಕೆ ಮಾಡಲು ಮತ್ತು ಮುಂಬರುವ ದಿನಗಳಲ್ಲಿ ಸ್ಥಳೀಯ ಅಂಗಸಂಸ್ಥೆಯನ್ನು ಸ್ಥಾಪಿಸಲು ಸಿದ್ದತೆ ನಡೆಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: