ಟ್ಯಾಕ್ಸಿ ಸೇವೆಯ ಮೂಲಕ ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆ ಸೃಷ್ಟಿಸಿಕೊಂಡ ಒಲಾ ಈಗ ತನ್ನ ಉದ್ಯಮ ಕ್ಷೇತ್ರವನ್ನು ಹಿಗ್ಗಿಸುತ್ತಿದೆ. ಈಗ ವಾಹನ ಉತ್ಪಾದನೆಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಗೆ ಮುಂದಾಗಿದೆ

ಹಲವು ದೇಶೀಯ ವಾಹನ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್, ಬೈಕ್ಗಳನ್ನು ಉತ್ಪಾದಿಸುವುದಕ್ಕೆ ಸಜ್ಜಾಗುತ್ತಿವೆ. ಹೀರೋ ಮೊಟೊ, ಟಿವಿಎಸ್ ಮೋಟಾರ್, ಬಜಾಜ್ ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿರುವಾಗಲೇ ಸಡ್ಡು ಹೊಡೆಯುವಂತೆ ಒಲಾ ಕೂಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಗೆ ಮುಂದಾಗಿದೆ.
ಕ್ಯಾಬ್ ಸೇವೆ ನೀಡುವ ಸಂಸ್ಥೆಯಾಗಿ ಜನಪ್ರಿಯತೆ ಗಳಿಸಿದ ಒಲಾ, ಏಥರ್ ಮತ್ತು ಒಕಿನಾವಾ ಹೆಸರಿನ ಎಲೆಕ್ಟ್ರಿಕ್ ವಾಹನಗಳ ಬ್ರ್ಯಾಂಡ್ಗಳಿಗೂ ಸ್ಪರ್ಧೆ ಒಡ್ಡಲಿದೆ. 2017ರಲ್ಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಒಲಾ 2021ರ ಜನವರಿಯಲ್ಲಿ ವಾಹನವನ್ನು ಮಾರುಕಟ್ಟೆ ತರಲಿದೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದ್ದು ಸುಮಾರು 2400 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಒಲಾ ಸಮೂಹದ ಸಂಸ್ಥಾಪಕ ಚೇರ್ಮನ್ ಭವೀಶ್ ಅಗರ್ವಾಲಾ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ವರ್ಷಕ್ಕೆ 20 ಲಕ್ಷ ಸ್ಕೂಟರ್ಗಳನ್ನು ಉತ್ಪಾದಿಸುವ ಸಾಮರ್ಥ್ಯದ ಘಟಕ ತಲೆ ಎತ್ತಲಿದ್ದು, ತಮಿಳುನಾಡಿನ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

10000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿರುವ ಈ ಬೆಳವಣಿಗೆ ವಾಹನ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಬಹುದು ಎಂದು ಹೇಳಲಾಗುತ್ತಿದೆ.