ವಿಜ್ಞಾನವನ್ನು ಜನಮನಗಳಿಗೆ ಸರಳವಾಗಿ ತಲುಪಿಸಿದ ಇಬ್ಬರು ಹಿರಿಯ ಬರಹಗಾರರಿಗೆ ಈ ಬಾರಿಗೆ ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ

ಹಿರಿಯ ಪತ್ರಕರ್ತ, ವಿಜ್ಞಾನ ಲೇಖನ, ಪರಿಸರವಾದ ನಾಗೇಶ್ ಹೆಗಡೆ ಹಾಗೂ ಮನೋವೈದ್ಯರಾದ ಸಿ ಆರ್ ಚಂದ್ರಶೇಖರ್ ಅವರಿಗೆ 2021ನೇ ಸಾಲಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೀಡುವ ಜೀವಮಾನದ ಸಾಧನೆಯ ಪ್ರಶಸ್ತಿ ಸಂದಿದೆ.
ಮಾರ್ಚ್ 2ರಂದು ಬೆಂಗಳೂರಿನ ಅಕಾಡೆಮಿಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ, ಪರಿಸರ ವಿಜ್ಞಾನವನ್ನು ಜನರಿಗೆ ತಲುಪಿಸಿದ ಹೆಗ್ಗಳಿಕೆ ನಾಗೇಶ್ ಹೆಗಡೆಯವರದ್ದು. ಭೂವಿಜ್ಞಾನ ವ್ಯಾಸಂಗ ಮಾಡಿ, ಉಪನ್ಯಾಸಕರಾಗಿಯೂ ಕೆಲ ಸೇವೆ ಸಲ್ಲಿಸಿದ ಹೆಗಡೆ, ನಂತರ ಪತ್ರಿಕೋದ್ಯಮದತ್ತ ವಾಲಿದರು. ವಿಜ್ಞಾನ ಸಂವಹನದಲ್ಲಿ ಅಪೂರ್ವ ಪ್ರಯೋಗಗಳನ್ನು ಮಾಡಿ, ಸರಳ, ಸುಲಭಗ್ರಾಹ್ಯವಾದ ಮಾಧ್ಯಮದ ಮೂಲಕ ವಿಜ್ಞಾನವನ್ನು ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ.
ಇತ್ತೀಚೆಗೆ ಹುಸಿ ವಿಜ್ಞಾನ ಕುರಿತು ಅವರು ಬರೆದ ಹಲವು ಬರಹಗಳು ಸಾಕಷ್ಟು ಚರ್ಚೆಗೆ ಕಾರಣವಾದವು.
ಇರುವುದೊಂದೇ ಭೂಮಿ, ಅಂತರಿಕ್ಷದಲ್ಲಿ ಮಹಾಸಾಗರ, ಗ್ರೆಟಾ ಥನ್ಬರ್ಗ್, ನಮ್ಮೊಳಗಿನ ಬ್ರಹ್ಮಾಂಡ ಸೇರಿದಂತೆ 25ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ಯುವ ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಶಸ್ತಿಗಳನ್ನು ಕೊಡುವಂತಾಗಬೇಕು. ಮೂವತ್ತು ಮೂವತ್ತೈದರ ವರ್ಷದವರನ್ನು ಗುರುತಿಸಬೇಕು. ಅವರಿಗೆ ಪ್ರಶಸ್ತಿಗಳನ್ನು ಕೊಡಬೇಕು. ವಿಜ್ಞಾನ ಸಂವಹನ ಮಾಡುವರರನ್ನು ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಕರೆದುಕೊಳ್ತೀವಿ. ಏಕೆಂದರೆ ಹೊಸಬರು ಬರುತ್ತಿಲ್ಲ. ಯಾವ ಹೊಸ ಹೆಸರು ಕೇಳಿ ಬರುತ್ತಿಲ್ಲ. ವಿಜ್ಞಾನ ಸಂವಹನದಲ್ಲಿ ಹೊಸಬರನ್ನು ಪ್ರೋತ್ಸಾಹಿಸಬೇಕಾದ್ದು ಇಂದಿನ ತುರ್ತು.
ನಾಗೇಶ್ ಹೆಗಡೆ ಅವರ ಪ್ರತಿಕ್ರಿಯೆ

ಮನೋವೈದ್ಯ ಕ್ಷೇತ್ರದಲ್ಲಿ ಸಿ ಆರ್ ಚಂದ್ರಶೇಖರ್ ಅವರ ಸಾಧನೆ ಅಪಾರ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾವಿರಾರು ಲೇಖನಗಳ ಮೂಲಕ ಜನಜಾಗೃತಿ ಮೂಡಿಸಿದ ಹಿರಿಮೆ ಇವರದ್ದು.
ದೆವ್ವ, ಭೂತ, ಭಾನಾಮತಿಗಳ ಬಗ್ಗೆ ಜನರಲ್ಲಿದ್ದ ಗ್ರಹಿಕೆಗಳು, ವಯೋ ಸಹಜವಾದ ಮಾನಸಿಕ ಆರೋಗ್ಯ ಸಮಸ್ಯೆಗಳು, ಸ್ಮರಣ ಶಕ್ತಿ ಕುರಿತು ತಪ್ಪು ಗ್ರಹಿಕೆಗಳು, ಹದಿಹರೆಯದ ಸಮಸ್ಯೆಗಳು ಕುರಿತು ಇವರ ಬರಹಗಳು ನೀಡಿರುವ ತಿಳಿವಳಿಕೆ ಅಪಾರ.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ 50ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿದ್ದು, ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಸಮಾಧಾನ ಹೆಸರಿನ ಸರ್ಕಾರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.