ಪ್ರತಿಷ್ಠಿತ ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ. ಈ ಬಾರಿ ಇದೆ ಮೊದಲ ಬಾರಿಗೆ ಬಾಲ ಪ್ರತಿಭೆಗಳನ್ನು ಗುರುತಿಸುತ್ತಿದೆ. ಮೊದಲ ಬಾರಿಗೆ ಭಾರತೀಯ ಮೂಲದ ಬಾಲಕಿ ಗೀತಾಂಜಲಿ ರಾವ್ ಆಯ್ಕೆಯಾಗಿದ್ದಾರೆ. ಯಾರಿದು? ಏನಿವರ ಸಾಧನೆ?

ಹದಿನೈದು ವರ್ಷದ ಗೀತಾಂಜಲಿ ರಾವ್ ಇಂದು ಬೆಳಗ್ಗೆಯಿಂದ ಸುದ್ದಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ನಿಯತಕಾಲಿಕೆ ‘ಟೈಮ್’ ಪತ್ರಿಕೆ ಇದೇ ಮೊದಲ ಬಾರಿಗೆ ವರ್ಷದ ಬಾಲಪ್ರತಿಭೆ, ‘ಕಿಡ್ ಆಫ್ ದಿ ಇಯರ್’ ಎಂದು ಆಯ್ಕೆ ಮಾಡಿದ್ದು ಈ ಗೌರವಕ್ಕೆ ಗೀತಾಂಜಲಿ ಪಾತ್ರರಾಗಿದ್ದಾರೆ.

ಎಂಟು ವರ್ಷದಿಂದ 16 ವರ್ಷದವರೆಗಿನ 5000 ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದರು. ಈ ಪೈಕಿ ಗೀತಾಂಜಲಿ ಅತ್ಯಂತ ಪ್ರಭಾವಿಯಾದ ಸಾಧನೆ ಮಾಡಿರುವುದಕ್ಕೆ ಗೀತಾಂಜಲಿಯವರನ್ನು ಆಯ್ಕೆ ಮಾಡಿದೆ ಎಂದು ಟೈಮ್ ಪತ್ರಿಕೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಆಂಜೆಲಿನಾ ಜೋಲಿಯೊಂದಿಗೆ ವಿಡಿಯೋ ಸಂವಾದ ನಡೆಸಿದ ಗೀತಾಂಜಲಿ ರಾವ್, ‘ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ನಾನು ಸಾಧನಗಳನ್ನು ಸಿದ್ಧಪಡಿಸಿದ್ದಷ್ಟೇ ಅಲ್ಲ, ಇಂಥದ್ದೇ ಕೆಲಸಗಳನ್ನು ಮಾಡಲು ಇತರರನ್ನು ಪ್ರೇರೇಪಿಸುವುದಕ್ಕಾಗಿ ಮಾಡಿದ್ದೇನೆ” ಎಂದಿದ್ದಾರೆ.
ವಿಜ್ಞಾನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿರುವ ಗೀತಾಂಜಲಿ ಅವರಿಗೆ ಮೂರು ವರ್ಷಗಳ ಹಿಂದೆ ಫ್ಲಿಂಟ್ನ ನೀರಿನ ಸಮಸ್ಯೆ ಕುರಿತು ವಿಷಯ ತಿಳಿಯಿತು. ನೀರಿನಲ್ಲಿ ಸತುವಿನ ಅಂಶವಿರುವುದು ಸುದ್ದಿಯಾಗಿತ್ತು. ಇಂತಹ ಕಲುಷಿತ, ವಿಷಪೂರಿತನ ನೀರಿನಿಂದ ಆಗುವ ಅನಾಹುತವನ್ನು ಅರಿತ ಗೀತಾಂಲಜಿ ನೀರಿನಲ್ಲಿ ಪ್ರಾಣಾಪಾಯ ಉಂಟುಮಾಡುವ ರಸಾಯನಿಕ ಪತ್ತೆ ಮಾಡುವ ಸಾಧನ ಸಿದ್ಧಪಡಿಸಲು ಮುಂದಾದರು.
ಅದರ ಫಲವೇ ‘ಟೆತೀಸ್’ (ಗ್ರೀಕ್ ಭಾಷೆಯಲ್ಲಿ ಟೆತೀಸ್ ಸಮುದ್ರ ದೇವತೆ) 9 ವೋಲ್ಟ್ ಬ್ಯಾಟರಿ ಇರುವ ಈ ಸಾಧನದಲ್ಲಿರುವ ಕಾರ್ಬನ್ ನ್ಯಾನೊ ಟ್ಯೂಬ್ಗಳು, ನೀರಿನಲ್ಲಿರುವ ಅಪಾಯಕಾರಿ ರಾಸಾಯನಿಕಗಳನ್ನು ಗುರುತಿಸುವುದಲ್ಲದೇ ಅದರಲ್ಲಿರುವ ಸೆನ್ಸರ್ ಮತ್ತು ಬ್ಲೂಟೂತ್ ಮೂಲಕ ಸಂದೇಶವನ್ನು ರವಾನಿಸುತ್ತದೆ.
ಈ ಸಾಧನ 2017ರಲ್ಲೇ ಡಿಸ್ಕವರಿ ಎಜುಕೇಷನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಪುರಸ್ಕಾರಕ್ಕೆ ಭಾಜನವಾಯಿತು. ಗೀತಾಂಜಲಿ ಈ ಅನ್ವೇಷಣೆಗೆ 25000 ಡಾಲರ್ಗಳ ಬಹುಮಾನ ಲಭಿಸಿತು. ಈ ಸಾಧನವನ್ನು ಹಲವು ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿದ ಗೀತಾಂಜಲಿ ಅವರಿಗೆ ಎಲ್ಲೆಡೆ ಮೆಚ್ಚುಗೆ ಮತ್ತು ಮನ್ನಣೆ ದೊರೆಯಿತು.