ಸುಮಾರು ಎರಡು ತಿಂಗಳ ಅವಧಿಗೆ ಲಾಕ್ಡೌನ್ ಆದ ಕಾರಣ ದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಏಕಾಏಕಿ ಸ್ಥಗಿತಗೊಂಡವು. ಆದರೆ ಇದರಿಂದಾಗಿ ವಿದ್ಯಾರ್ಥಿಗಳು-ಪೋಷಕರು ಆತಂಕಗೊಂಡರು. ಶಿಕ್ಷಣ ಸಂಸ್ಥೆಗಳು ಅನಿವಾರ್ಯವಾಗಿ ಆನ್ಲೈನ್ ಲೈನ್ ಪಾಠಗಳತ್ತ ಹೊರಳಿದವು. ಆದರೆ ಭಾರತದಲ್ಲಿರುವ ಇಂಟರ್ನೆಟ್ ವೇಗ ಸೃಷ್ಟಿಸಿದ ತಾರತಮ್ಯದ ಕತೆ ಇಲ್ಲಿದೆ

ಆದರೆ ನಿಜಕ್ಕೂ ಇದು ಅನುಕೂಲಕರವಾಗಿತ್ತೆ? ಎಲ್ಲ ವಿದ್ಯಾರ್ಥಿಗಳಿಗೂ ಆನ್ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವೆ? ಎಂಬ ಪ್ರಶ್ನೆಗಳು ಏಳಲಾರಂಭಿಸಿದವು. ರೆಸ್ಟ್ ಆಫ್ ವರ್ಲ್ಡ್ ಸಂಸ್ಥೆ ಕೂಡ ಇಂಥದ್ದೇ ಒಂದು ಪ್ರಶ್ನೆಯನ್ನು ಆರಿಸಿಕೊಂಡು ಒಂದು ಪ್ರಯೋಗ ಮಾಡಿತು. ಅದೇನೆಂದರೆ ಇಂಟರ್ನೆಟ್ ಸ್ಪೀಡ್.
ನೀಲೇಶ್ ಕ್ರಿಸ್ಟೋಫರ್ ಮತ್ತು ವರ್ಷ ಬನ್ಸಲ್ ಅವರ ಈ ವಿಶೇಷ ವರದಿ ಕಾಶ್ಮೀರ ಮತ್ತು ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡಿದೆ. ರೇಖಾ ತಮಿಳುನಾಡಿನವರು, ಆಸ್ಮಾ ಕಾಶ್ಮೀರದವರು. ಇಬ್ಬರೂ ಪಶ್ಚಿಮ ಬಂಗಾಳದ ಮೌಲನಾ ಆಜಾದ್ ಕಾಲೇಜ್ ವಿದ್ಯಾರ್ಥಿಗಳು.
ಲಾಕ್ಡೌನ್ನಿಂದಾಗಿ ಈ ಇಬ್ಬರು ತಮ್ಮ ಮನೆಗಳಿಗೆ ಮರಳಿದರು. ಒಂದು ವಾರದ ಬಳಿಕ ತಮ್ಮ ಐಚ್ಛಿಕ ವಿಷಯವಾದ ಬಯೋಟೆಕ್ ತರಗತಿಗಳು ಝೂಮ್ ಮೂಲಕ ಆರಂಭವಾದವು. ಇದರಲ್ಲಿ 20 ವಿದ್ಯಾರ್ಥಿಗಳು ಸೇರಿಕೊಂಡರು. ಆದರೆ ಆಸ್ಮಾ ಒಬ್ಬರು ಇರಲಿಲ್ಲ!
ಆಸ್ಮಾ ಇರುವುದು ಕಾಶ್ಮೀರದಲ್ಲಿ. ನಿಮಗೆ ತಿಳಿದಿರುವಂತೆ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಸರ್ಕಾರ ತೀವ್ರವಾಗಿ ನಿಯಂತ್ರಿಸುತ್ತಿದೆ. ಅಲ್ಲಿ ಸದ್ಯ ಇರುವುದು ಸೀಮಿತವಾದ 2ಜಿ ಸೇವೆ. ಇಂಥ ನೆಟ್ವರ್ಕ್ನಲ್ಲಿ ಝೂಮ್ ಕೆಲಸ ಮಾಡುವುದು ಕಷ್ಟ. ಹಾಗಾಗಿ ಆಸ್ಮಾಗೆ ನೇರ ಲೆಕ್ಚರ್ಗಳನ್ನು ಕೇಳುವುವುದಕ್ಕೂ ಆಗಲಿಲ್ಲ. ನಂತರದಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದಕ್ಕೂ ಆಗಲಿಲ್ಲ.
ರೆಸ್ಟ್ ಆಫ್ ವರ್ಲ್ಡ್ ವರದಿಗಾರರೊಂದಿಗೆ ಮಾತನಾಡಿರುವ ಆಸ್ಮಾ ಹೇಳಿರುವ ಮಾತು ಹೀಗಿದೆ: “ಝೂಮ್ ಆಪ್ ಡೌನ್ಲೋಡ್ ಮಾಡುವುದಕ್ಕೆ ಒಂದಿಡೀ ದಿನ ಕಳೆದಿದ್ದೀನಿ. ಅದು 90% ಆದ ಮೇಲೆ ನಿಂತುಬಿಟ್ಟಿತು. ಆಮೇಲೆ ಫೇಲ್ಡ್ ಎಂದು ತೋರಿಸಿತು”.
ಆಸ್ಮಾರಿಂದ ಸುಮಾರು 1500 ಕಿ.ಮೀ. ದೂರದ ತಮಿಳುನಾಡಿನ ಒಂದು ಹಳ್ಳಿಯಲ್ಲಿರುವ ರೇಖಾ 11 ಗಂಟೆಗೆ ಸರಿಯಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ರಾತ್ರಿ 9 ಗಂಟೆ ವರೆಗೆ ನಡೆಯುವ ತರಗತಿಗಳು, ಪ್ರತಿ ಒಂದು ಗಂಟೆ ತರಗತಿಯ ನಂತರ ಸಣ್ಣ ಬಿಡುವು, ದಿನದ ಮಧ್ಯದಲ್ಲಿ ನಾಲ್ಕು ಗಂಟೆಗೆ ವಿರಾಮ ನೀಡಲಾಗುತ್ತಿದೆ. ರೇಖಾ ನಿರಾಂತಕವಾಗಿ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದು, ಇದನ್ನು ಸಾಧ್ಯವಾಗಿಸಿರುವುದು 4ಜಿ ಇಂಟರ್ನೆಟ್ ಲಭ್ಯತೆ.
ಇಂಟರ್ನೆಟ್ ಲಭ್ಯತೆಯಲ್ಲಿರುವ ಈ ವ್ಯತ್ಯಾಸ ಈ ವಿದ್ಯಾರ್ಥಿಗಳ ಬದುಕಿನಲ್ಲಿ ಕೆಲವೇ ವಾರಗಳಲ್ಲಿ ಭಿನ್ನ ಸ್ಥಿತಿಯಲ್ಲಿದ್ದರು ಎಂದೇ ಹೇಳಬಹುದು.
ರೆಸ್ಟ್ ಆಫ್ ವರ್ಲ್ಡ್ ಒಂದು ಮುಖ್ಯವಾದ ಅಂಶದತ್ತ ಗಮನಸೆಳೆಯುತ್ತದೆ. ಇಡೀ ಭಾರತದ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವಾಗ, ಜಮ್ಮು ಮತ್ತು ಕಾಶ್ಮೀರದ 27ಲಕ್ಷ ವಿದ್ಯಾರ್ಥಿಗಳು ಇದರಿಂದ ಸಂಪೂರ್ಣವಾಗಿ ವಂಚಿತರಾಗುತ್ತಿದ್ದಾರೆ ಎಂಬ ಅಂಶವನ್ನು ಎತ್ತಿ ಹಿಡಿಯುತ್ತದೆ.
ಕಾಶ್ಮೀರದಲ್ಲಿ ಈಗ 2ಜಿ ಸೇವೆ ಬರುವುದಕ್ಕೂ ಇಂಟರ್ನೆಟ್ ಸೇವೆಯೇ ಇರಲಿಲ್ಲ. ಸುಮಾರು 6 ತಿಂಗಳ ತಿಂಗಳ ಕಾಲ ನಿಷೇಧಿಸಲಾಗಿದ್ದ ಇಂಟರ್ನೆಟ್ ಸೇವೆಯನ್ನು ಜನವರಿಯಲ್ಲಿ ಭಾಗಶಃ ತೆರವುಗೊಳಿಸಲಾಯಿತು. ಆದರೆ ಲಾಕ್ಡೌನ್ 2ಜಿಯ ವೇಗವನ್ನು ಇನ್ನಷ್ಟು ತಗ್ಗಿಸಿತು.
ಇಬ್ಬರ ದಿನಚರಿ ಹೀಗಿದೆ
ರೆಸ್ಟ್ ಆಫ್ ವರ್ಲ್ಡ್ ರೇಖಾ ಮತ್ತು ಆಸ್ಮಾರ ದಿನಚರಿಯನ್ನು ದಾಖಲಿಸಿದೆ. ಅದು ಹೀಗಿದೆ.
ತಮಿಳುನಾಡಿನಲ್ಲಿರುವ ರೇಖಾ ಹಾಸಿಗೆಯಲ್ಲಿರುವಾಗಲೇ ವಾಟ್ಸ್ಆಪ್ ಮೂಲಕ ಬರುವ ತರಗತಿಗಳ ಪಟ್ಟಿಇರುವ ಪಿಡಿಎಫ್, ತರಗತಿಗೆ ಅಗತ್ಯವಾದ ಪವರ್ಪಾಯಿಂಟ್ ಪ್ರೆಸೆಂಟೇಷನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಹಾಸಿಗೆಯಲ್ಲಿದ್ದಾಗ, ಒಂದಿಷ್ಟು ಸುದ್ದಿ, ವಿಡಿಯೋಗಳನ್ನು ಹಾಗೂ ಫೇಸ್ಬುಕ್ನಲ್ಲಿ ತಮ್ಮ ಸ್ನೇಹಿತರ ಅಪ್ಡೇಟ್ಗಳನ್ನು ಗಮನಿಸುತ್ತಾರೆ. ನಂತರ ಇನ್ಸ್ಟಾಗ್ರಾಮ್ನಲ್ಲಿ ಕ್ವಾರಂಟೈನ್ನಲ್ಲಿರುವ ಬಾಲಿವುಡ್ನಟರ ವರ್ಕ್ಔಟ್ ವಿಡಿಯೋಗಳನ್ನು ನೋಡುತ್ತಾರೆ. 10.45ಕ್ಕೆ ತಮ್ಮ ಲ್ಯಾಪ್ಟಾಪ್ ಅನ್ನು ಮೊಬೈಲ್ ಹಾಟ್ಸ್ಪಾಟ್ಗೆ ಕನೆಕ್ಟ್ ಮಾಡಿ, ತಮ್ಮ ಬಯೋಟೆಕ್ ತರಗತಿಗಾಗಿ ಮೀಸಲಿರುವ ಮೈಪರ್ಫೆಕ್ಟಿಸ್.ಕಾಂ ಗೆ ಲಾಗ್ಇನ್ ಆಗುತ್ತಾರೆ. ಆರಂಭದಲ್ಲಿ ಝೂಮ್ ಬಳಸಿದ ಕಾಲೇಜು, ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಸರ್ಕಾರದ ಸೂಚನೆಯ ಬಳಿಕ ಪ್ರತ್ಯೇಕ ವೆಬ್ಸೈಟ್ನಲ್ಲಿ ತರಗತಿ ನಡೆಸಲು ಆರಂಭಿಸಿದ್ದಾರೆ.
ಇನ್ನು ಕಾಶ್ಮೀರದಲ್ಲಿರುವ ಆಸ್ಮಾಗೆ ಈ ತರಗತಿಗಳಲ್ಲಿ ಭಾಗವಹಿಸಲು ಆಗದಿರುವುದರಿಂದ ಈ ಮೇಲ್ ಮೂಲಕ ವ್ಯಾಸಂಗಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಈಕೆ ದಿನ ಆರಂಭವಾಗುವುದೇ ಇಂಟರ್ನೆಟ್ ಸೇವೆಯ ಬಗ್ಗೆ ತಮಾಷೆ ಮಾಡುವುದರ ಮೂಲಕ . ಆಸ್ಮಾ, ತಮ್ಮ ವಾಟ್ಸ್ಆಪ್ಗೆ ಬರುವ ಕಾಶ್ಮೀರದ ಇಂಟರ್ನೆಟ್ ಸಮಸ್ಯೆಯನ್ನು ಗೇಲಿ ಮಾಡುವ ಮೀಮ್ಗಳನ್ನು ನೋಡುತ್ತಾರೆ. ನಂತರ ಈ ಮೇಲ್ ನೋಡುತ್ತಾರೆ. ಈ ವರದಿ ಬರೆದ ದಿನ( ಮಂಗಳವಾರ) ಆಸ್ಮಾಗೆ ಇಮ್ಯುನೋಲಾಜಿ ಅಸೈನ್ಮೆಂಟ್ ನೀಡಲಾಗಿದೆ. ಅದಕ್ಕಾಗಿ ಅವರಿಗೆ ಐದು ಪವರ್ಪಾಯಿಂಟ್ ಪ್ರೆಸೆಂಟೇಷನ್ ಡೌನ್ಲೋಡ್ ಮಾಡಬೇಕು.
ರೆಸ್ಟ್ ಆಫ್ ವರ್ಲ್ಡ್ ವರದಿ ಹೇಳುವಂತೆ ಪ್ರಸ್ತುತ ಕಾಶ್ಮೀರದಲ್ಲಿರುವುದು 320 ಕೆಬಿ ಪಿಎಸ್ ಸ್ಪೀಡ್ (ಇಡೀ ಭಾರತ ಸರಾಸರಿ 11 ಎಂಬಿಪಿಎಸ್ ವೇಗದ ಇಂಟರ್ನೆಟ್ ಬಳಸುತ್ತಿದೆ!) ಆ ಐದು ಫೈಲ್ಗಳನ್ನು ಡೌನ್ಲೋಡ್ ಮಾಡಲು ಅರ್ಧ ದಿನ ಕಾದ ಆಸ್ಮಾ ಒಂಟಿಯಾಗಿ ತನ್ನ ಅಸೈನ್ಮೆಂಟ್ ಬರೆದು ಮುಗಿಸುವುದರಲ್ಲಿ ಮುಳುಗಿದ್ದರು. ಈ ನಡುವೆ ಸ್ನೇಹಿತರಿಂದ ಲುಡೊ ಕಿಂಗ್ ಆಡಲು ಇನ್ವೈಟ್ ಬರುತ್ತದೆ. ಡೌನ್ಲೋಡ್ಗೆ ತೊಂದರೆಯಾಗುತ್ತದೆ ಎಂದು ರಾತ್ರಿ ಆಡುವುದಾಗಿ ಆಸ್ಮಾ ಆಹ್ವಾನ ತಳ್ಳಿ ಹಾಕುತ್ತಾರೆ.
ಇದನ್ನೂ ಓದಿ | ಕರೋನಾ ಕಳವಳ | ಯೂಟ್ಯೂಬ್, ಫೇಸ್ಬುಕ್ ಕರೋನಾ ವೈರಸ್ ಕುರಿತ ಈ ವಿಡಿಯೋ ಡಿಲೀಟ್ ಮಾಡಿರುವುದೇಕೆ?
ಆಸ್ಮಾ ಊರಿಗೆ ಮರಳುವುದಕ್ಕೂ ಮುನ್ನ ಯೂಟ್ಯೂಬ್ನಲ್ಲಿದ್ದ ಖಾನ್ಅಕಾಡೆಮಿಯ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಂಡು ಬಂದಿದ್ದರಂತೆ. ಈಗ ಅವೇ ಅವರಿಗೆ ಆಧಾರ.
ಅತ್ತ ರೇಖಾ 9 ಗಂಟೆಗೆ ತನ್ನೆಲ್ಲಾ ತರಗತಿಗಳನ್ನು ಮುಗಿಸಿಕೊಂಡು ಇನ್ಸ್ಟಾಗ್ರಾಮ್ ಅಪ್ಡೇಟ್ಗಳನ್ನು ನೋಡಿ, ಲುಡೊ ಆಡುತ್ತಾ ನಿದ್ರೆ ಜಾರಿ ಬಿಡುತ್ತಾರೆ.
ಇತ್ತ ಆಸ್ಮಾ, 10 ಗಂಟೆಯ ಸುಮಾರಿಗೆ ಫೋನ್ ಹಿಡಿದು, ಪವರ್ಪಾಯಿಂಟ್ ಪ್ರೆಸೆಂಟೇಷನ್ ಸ್ಲೈಡ್ಗಳನ್ನು ನೋಡುತ್ತಾ, ನೋಟ್ಸ್ ಮಾಡಿಕೊಳ್ಳುತ್ತಾ, ತನ್ನ ಲೆಕ್ಚರರ್ಗೆ ಕೇಳಬೇಕಾದ ಪ್ರಶ್ನೆಗಳನ್ನು ಈ ಮೇಲ್ ಮೂಲಕ ಕೇಳುವುದಕ್ಕೆ ಸಿದ್ಧವಾಗುತ್ತಾರೆ ಎಂದು ರೆಸ್ಟ್ ಆಫ್ ವರ್ಲ್ಡ್ ವರದಿ ಇಬ್ಬರ ವಿದ್ಯಾರ್ಥಿಗಳ ಇಂಟರ್ನೆಟ್ ಅವಲಂಬಿಸಿದ ದಿನಚರಿಯನ್ನು ಚಿತ್ರಿಸಿದೆ.
ಇದು ಎರಡು ವಿದ್ಯಾರ್ಥಿಗಳ ಕತೆ. ಆಸ್ಮಾರಂತೆ ಸಮಪರ್ಕ ಇಂಟರ್ನೆಟ್ ಸೇವೆಯೇ ಇಲ್ಲದ ವಿದ್ಯಾರ್ಥಿಗಳು ದೇಶದಲ್ಲಿದ್ದಾರೆ. ಡಿಜಿಟಲ್ ಭಾರತವನ್ನು ಸಂಭ್ರಮಿಸುವ ಜನ ಮತ್ತು ವ್ಯವಸ್ಥೆ ಈ ತಾರತಮ್ಯ ಮತ್ತು ಇದರಿಂದಾಗುವ ಅನ್ಯಾಯವನ್ನು ಗಮನಿಸಬೇಕು.