ಆಸ್ಟ್ರೇಲಿಯಾದ ಬಯೋಮೆಡ್ಸೆಂಟ್ರಲ್ ಪ್ರಕಟಿಸಿರುವ ವರದಿಯ ಪ್ರಕಾರ ನಾವು ಬಳಸುವ ಮೊಬೈಲ್ ಸ್ಕ್ರೀನ್ ಮೇಲೆ ಕರೋನಾ ವೈರಸ್ 28 ದಿನಗಳ ಕಾಲ ಇರಬಹುದು ಎಂದಿದೆ. ಅಂದರೆ ಅಷ್ಟು ದಿನಗಳ ಕಾಲಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದರ್ಥ!

ಕರೊನಾ ವೈರಸ್ ಹರಡುವಿಕೆ ಕುರಿತು ಆತಂಕ ನಿರಂತರವಾಗಿದೆ. ಹೊಸ ಅಧ್ಯಯನ, ಸಂಶೋಧನೆಗಳು ಹೊಸ ಸಾಧ್ಯತೆಗಳನ್ನು ಬಿಚ್ಚಿಡುತ್ತಿದ್ದು, ನಾವು ಹೆಚ್ಚು ಹೆಚ್ಚು ಎಚ್ಚರವಹಿಸುವ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಮೊಬೈಲ್ ಸ್ಕ್ರೀನ್ ಸೋಂಕು ಹರಡುವ ಸಾಧ್ಯತೆ ಅತಿ ಹೆಚ್ಚು ಎಂದು ಆಸ್ಟ್ರೇಲಿಯಾದ ಬಯೋಮೆಡ್ಸೆಂಟ್ರಲ್ ಜರ್ನಲ್ ಪ್ರಕಟಿಸಿದೆ.
ವೈರಾಣುಗಳ ಮೇಲಿನ ಅಧ್ಯಯನಗಳನ್ನು ಪ್ರಕಟಿಸುವ ಈ ಜರ್ನಲ್ನಲ್ಲಿ ಅಕ್ಟೋಬರ್ 7ರಂದು ಶೇನ್ ರಿಡಲ್, ಸಾರಾಹ ಗೋಲ್ಡಿ, ಆಂಡ್ರ್ಯೂ ಹಿಲ್, ಡೆಬ್ಬಿ ಈಗಲ್ಸ್ ಮತ್ತು ಟ್ರೆವರ್ ಡ್ಯ್ರೂ ಅವರುಗಳ ತಂಡ ಒಂದು ವರದಿ ಪ್ರಕಟಿಸಿದೆ. ಇದರಲ್ಲಿ ಕೋವಿಡ್ 19 ಹರಡುವುದಕ್ಕೆ ಕಾರಣವಾಗಿರುವ ಸಾರ್ಸ್-ಸಿಒವಿ-2 ವೈರಸ್, ಯಾವುದೇ ಕಲುಷಿತ ವಸ್ತುವಿನ ಮೇಲೆ ಎಷ್ಟು ಕಾಲ ಜೀವಂತವಾಗಿರುತ್ತದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದೆ ( ಸಂಶೋಧನೆ ಪೂರ್ಣ ವರದಿ ಇಲ್ಲಿದೆ).
ಕೈತೊಳೆಯುವುದು ಮತ್ತು ಮಾಸ್ಕ್ ಧರಿಸುವುದು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದರೆ ನಾವು ದಿನ ನಿತ್ಯ ಬಳಸುವ ವಸ್ತುಗಳ ವಿಷಯದಲ್ಲಿ, ವಿಶೇಷವಾಗಿ ದಿನದ ಬಹುಭಾಗ ಬಳಸುವ ಸಾಧನಗಳ ಸ್ವಚ್ಛತೆಯ ಬಗ್ಗೆಯೂ ಅಷ್ಟೇ ಎಚ್ಚರವಹಿಸುವ ಅಗತ್ಯವಿದೆ. ಬಹಳ ಮುಖ್ಯವಾಗಿ ಸ್ಮಾರ್ಟ್ ಫೋನ್.
ಸಂಶೋಧನಾ ತಂಡದ ಅಧ್ಯಯನದಲ್ಲಿ ತಿಳಿದು ಬಂದಿರುವಂತೆ, 20 ಡಿಗ್ರಿ ಸೆಲ್ಸಿಯಸ್ನ ತಾಪಮಾನ ಮತ್ತು 50%ರಷ್ಟು ತೇವ ಇರುವ ಜಾಗದಲ್ಲಿ ಕರೋನಾ ವೈರಸ್ 28 ದಿನಗಳ ವರೆಗೆ ಬದುಕುಳಿಯುತ್ತದೆ. ಹಾಗಾಗಿ ಗಾಜು, ಸ್ಟೀಲ್ ಮತ್ತು ಬ್ಯಾಂಕ್ನೋಟ್ಗಳ ಮೇಲೆ ವೈರಸ್ ಹೆಚ್ಚು ಕಾಲ ಇರುವ ಸಾಧ್ಯತೆ ಇದೆ ಎಂದಿದೆ.
ವಿವಿಧ ತಾಪಮಾನಗಳಲ್ಲಿ, ಹಲವು ದಿನಗಳ ಕಾಲ ವೈರಸ್ನ ಜೀವಿತಾವಧಿಯನ್ನು ಪರೀಕ್ಷಿಸಿರುವ ತಂಡ, ದಿನದ ಕನಿಷ್ಠ 8 ಗಂಟೆಗಳನ್ನು ಸ್ಮಾರ್ಟ್ಫೋನ್ನೊಂದಿಗೆ ಕಳೆಯುತ್ತಿರುವ ಈ ದಿನಗಳಲ್ಲಿ, ನಮ್ಮ ಕೈಗಳನ್ನು ತೊಳೆದುಕೊಂಡಂತೆ, ಫೋನ್ನ ಸ್ಕ್ರೀನ್ ಅನ್ನು ಸ್ವಚ್ಛ ಮಾಡಿ ಸೋಂಕು ಮುಕ್ತವಾಗಿಸುವುದು ಅತ್ಯಂತ ಅಗತ್ಯವಾಗಿ ಮಾಡಬೇಕಾದ ಕೆಲಸ.